<ನಳಚರಿತ್ರೆ
ನಳಚರಿತ್ರೆ:ನಾಲ್ಕನೆಯ ಸಂಧಿ (ಸಂಗ್ರಹ)
ನಾಲ್ಕನೆಯ ಸಂಧಿ
ಒಂದು ದಿವಸದದೊಳಾಗ ನೃಪನಿಗೆ 
ಬಂದುದಲ್ಲಾಚಮನಕಾಲದೊ 
ಳಂದು ಶುದ್ಧಾಚಮನವಿಲ್ಲದೆ ನಿಂದು ನೀರ್ಗುಡಿಯೆ 
ಇಂದು ತನಗಿದೆ ಸಮಯವೆಂದಾ 
ನಂದದಲಿ ಕಲಿಪುರುಷ ರಾಯನ 
ಸಂಧಿಸಿದ ವಿಧಿವಶವ ತಪ್ಪಿಸಲಾರ ಹವಣೆಂದ ||೨೧||

ಕಪಟ ಭೂಸುರವೇಶದಲಿ ನಿ 
ಷ್ಕಪಟ ನಳಭೂವರನ ಕೆಡಿಸುವ 
ಯುಪಮೆಯನು ತಾ ನೆಗಳಿ ಬಂದನು ಪುಷ್ಕರನ ಹೊರೆಗೆ 
ನಿಪುಣನೆಂದನು ನಿನಗೆ ನಳಭೂ 
ಮಿಪನು ಸಖನೆನೆ ಕೇಳಿ ಬಂದಿಹೆ 
ನಪಯಶಕೆ ಹೆದರದಿರು ನಿನಗಹುದಖಿಳಸಾಮ್ರಾಜ್ಯ ||೨೨||

ಬಲ್ಲೆಯಾ ನೀನೆನ್ನ ಲೋಕಕೆ 
ಬಲ್ಲಿದನು ತಾ ಕಲಿಪುರುಷ ನಳ 
ನಲ್ಲಿ ದ್ಯೂತವನಾಡಿ ಗೆಲಿಸುವೆ ನಿನ್ನ ನೆತ್ತದಲಿ 
ಒಲ್ಲೆನೆನದಿರು ಸಕಲರಾಜ್ಯದ 
ವಲ್ಲಭನ ಮಾಡುವೆನು ನಡೆ ಹುಸಿ 
ಯಿಲ್ಲ ನಿಷಧನ ಕಿತ್ತು ಬಿಸುಡುವೆ ನಂಬು ನೀನೆಂದ ||೨೩||

ನಂಬಿದನು ಲೇಸಾಗಿ ಭಾಷೆಯ 
ನಿಂಬುಗೊಂಡುದು ಹೃದಯ ಪುಷ್ಕರ
ನೆಂಬ ಖಳ ಸಂತೋಷದಲಿ ಕಲಿಪುರುಷನೊಡಗೊಂಡು 
ಅಂಬುಜಾಕ್ಷನ ಕಳೆಗೆ ತಾ ಪ್ರತಿ 
ಬಿಂಬನೆನಿಸುವ ನಳನ ಬಳಿಗತಿ 
ಸಂಭ್ರಮದೊಳೈತಂದರಿಬ್ಬರು ರಾಯನೋಲಗಕೆ ||೨೪||

ಅರಸ ಕೇಳೀ ವಿಪ್ರನತಿ ಭಾ 
ಸುರ ಸುತೇಜದೊಳೆಸೆವ ನೆತ್ತವ 
ನೆರಡ ಕಾಣಿಕೆಗೊಟ್ಟ ನನಗಿದರಲ್ಲಿ ಮನವಾಯ್ತು 
ಹರವು ಹಾಸಂಗಿಗಳನಾಡುವೆ 
ವಿರದೆ ಸೋತವನಾವನಾಗಲಿ 
ಧರೆಯನುಳಿದು ವನಾಂತರಕೆ ತೆರಳುವುದು ಸತಿಸಹಿತ ||೨೬|| 

ಧರಣಿಪತಿ ನಿನಗಿನಿತು ಚಿತ್ತಕೆ 
ಹರುಷವಾಗಿರಲಿನ್ನು ಮನದಲಿ 
ಕೊರತೆದೋರಲು ಮಾಣುಯಿದು ಪಾರ್ಥಿವರ ಪಂಥ ಕಣ 
ಧುರಕೆ ಬೇಂಟೆಗೆ ಜೂಜಿಗೆಂದಡೆ 
ಕರೆದಡೋಸರಿಸುವುದು ನೀತಿಯೆ 
ನಿರುತವಿದು ಚಿತ್ತೈಸುಯೆಂದನು ನೃಪಗೆ ಕೈಮುಗಿದು ||೨೭||

ಆಡಿದನು ಜೂಜಿನಲಿ ನೃಪ ಹೋ 
ಗಾಡಿದನು ರಾಜ್ಯವನು ಕೋಶವ
ಕೇಡುಗರ ಕೈ ಮೇಳವಿಸಿದುದು ದೈವಗತಿಯಿಂದ 
ಬಾಡಿತರಸನ ವದನ ಸಭೆಯಲಿ 
ನೋಡಿದರು ಸಜ್ಜನರು ಮರುಗಿದ 
ರಾಡಲೇನದನರಸ ಸೋತನು ವಿಧಿಯ ಘಟನೆಯಲಿ ||೩೦||

ಅರಸನಾಪ್ತಪುರೋಹಿತನು ಮನ 
ಹರುಷವಿಳಿದೆಯ್ತಂದನಂತಃ
ಪುರವಹೊಕ್ಕನು ರಾಜದವದನೆಯ ಸಭೆಗೆ ತಾ ಬಂದು 
ತರುಣಿಯರ ಮೇಳದಲಿ ಶೋಭಿಪ
ಪರಮರತ್ನದ ಪೀಠದಲಿ ತಾ 
ಹರುಷಮಿಗೆ ರಂಜಿಸುವ ಸತಿಯಳ ಕಂಡು ಕೈಮುಗಿದು ||೩೨||

ತಾಯೆ ಬಿನ್ನಹವಿದು ನಿಮ್ಮಯ 
ರಾಯ ಸೋತನು ಜೂಜಿನಲಿ ನಿ 
ರ್ದಾಯದಲಿ ಪುಷ್ಕರನು ಗೆಲಿದನು ಸಕಲರಾಜ್ಯವನು 
ನೋಯಲಾಗದು ಚಿತ್ತದಲಿ ನೆರೆ 
ಬೀಯವಾದುದು ಸಿರಿಯುಯಿನ್ನಿದ 
ರಾಯತವ ನೀವ್ ಬಲ್ಲಿರೆಂದನು ವಿಪ್ರ ಕೈಮುಗಿದು||೩೩||

ಕಮಲವನದಲಿ ಮಂಜು ಸುರಿದಾ 
ಕ್ರಮದ ಬಗೆಯಲಿ ಸತಿಯಳಿಗೆ ಮುಖ 
ಕಮಲ ಬಾಡಿತು ನುಡಿಯಕೇಳುತ ಮನದ ಚಿಂತೆಯಲಿ 
ಕಮಲನಾಭನ ಕರುಣಕವಚವು 
ಸಮೆದರಾರೇಗುವರು ಹರಹರ 
ಕುಮತಿ ಪುಷ್ಕರನಿಂತು ಮುನಿದನೆಯೆನುತ ಮರುಗಿದಳು ||೩೪||

ಕಮಲಮುಖಿ ನಳನೃಪಗೆ ರಾಜ್ಯ 
ಭ್ರಮಣವಾಯಿತೆಯೆನುತ ಸತಿ ಭೂ 
ರಮಣನೆಡೆಗೈತಂದು ಕಂಡಳು ಕಾಂತನಿಂಗಿತವ 
ತಮದ ರಾಹುಗ್ರಹವು ಸೋಂಕಿದ 
ದ್ಯುಮಣಿಯಂತಿರೆ ಕಂಡು ಧೈರ್ಯದಿ 
ಕಮಲಮುಖಿ ಕೈಮುಗಿದು ಬಿನ್ನೈಸೆದಳು ನಿಜಪತಿಗೆ ||೩೫||

ತರುಣಿ ಕೇಳಪಜಯದ ನಾರಿಯ 
ಸೆರಗ ಹಿಡಿದೆನು ರಾಜ್ಯಲಕ್ಷ್ಮಿಯ 
ಪರರಿಗಿತ್ತುಳುಹಿದೆನು ದೇಹವನಿದಕೆಯಂಜದಿರು 
ತರುಣಿ ನೀ ಕಾನನದಿ ಗಿರಿಗ 
ಹ್ವರಗಳಲಿ ಬಿಡದೆಂತು ತೊಳಲುವೆ 
ಹರಹರಾಯೆಂದೆನುತ ಸತಿಯನು ನೋಡಿ ಬಿಸುಸುಯ್ದ||೩೮||

ಚಿಂತೆ ಬೇಡೆಂದರಸನನು ಸತಿ 
ಸಂತವಿಟ್ಟಳು ನೀತಿಯಲಿ ದಮ 
ಯಂತಿ ನಿಜಮಂದಿರಕೆ ಸರಿಯಲು ಕಂಡು ಪುಷ್ಕರನು 
ಇಂತುಜೂಜಲಿ ಸೋತು ತಿರಿಗಿ 
ನ್ನೆಂತು ರಾಜ್ಯದಿ ನಿಲುವಿರೆನೆ ಭೂ 
ಕಾಂತ ವನವಾಸಕ್ಕೆ ನಿಜಸತಿಸಹಿತಲನುವಾದನು ||೪೧|| 

ನೋಡಿ
ನಳಚರಿತ್ರೆ- ಸಂಧಿಗಳು>:೧೨೩೪೫೬೭೮೯
ನೋಡಿ

ವರ್ಗ:ಕನಕದಾಸರ ಸಾಹಿತ್ಯ
ವರ್ಗ:ಕನ್ನಡ ಸಾಹಿತ್ಯ